ಎದೆಗೂಡು-
	ಕೊರಳಿಗೂ ಹೊಟ್ಟೆಗೂ ನಡುವೆ ಇರುವ ಮುಂಡದ ಭಾಗ (ಥೊರ್ಯಾಕ್ಸ್). ಇದರ ಎಲುಗಟ್ಟಿನಲ್ಲಿ (ಸ್ಕೆಲಿಟನ್), 12 ಪಕ್ಕೆಲುಬುಗಳ ಜೋಡಿಗಳೂ ಎದೆಚೆಕ್ಕೆಯೂ (ಸ್ಟರ್ನಂ) 12 ಎದೆಗೂಡಿನ ಬೆನ್ನೆಲುಬುಗಳೂ ಇವೆ. ಇವಕ್ಕೆ ಸಂಬಂಧಿಸಿದಂತೆ ಅನೇಕ ಬಲವಾದ ಸ್ನಾಯುಗಳಿವೆ. ಕವಚವಾಗಿ ಕೊಬ್ಬೂ ಚರ್ಮದ ಊತಕಗಳೂ ಇವೆ. ಇದರ ಗಾತ್ರದ ಬದಲಾವಣೆಗಳಿಂದ ಉಸಿರಾಟ ಸಾಧ್ಯ. ಎದೆಗೂಡಲ್ಲಿರುವ ಮುಖ್ಯ ಅಂಗಗಳು ಉಸಿರಾಟ, ರಕ್ತಸುತ್ತಾಟದವು ; ಫುಪ್ಪುಸಗಳು, ಉಸಿರ್ನಾಳ ಮತ್ತದರ ಕವಲುಗಳು, ಗುಂಡಿಗೆ ಮತ್ತದರ ದೊಡ್ಡ ರಕ್ತನಾಳಗಳು, ಹಾಲುರಸ ಸಾಗುನಾಳಗಳು (ಲಿಂಫ್ಯಾಟಿಕ್ ಡಕ್ಟ್ಸ್). ಕೆಳಗಿನ ತೆರಪಾದ ತಳದಲ್ಲಿ, ಸ್ನಾಯುಗೂಡಿನ ವಪೆ ಎದೆಗೂಡೊಳಕ್ಕೆ ಉಬ್ಬಿಕೊಂಡಿದೆ. ಮೇಲ್ಗಡೆ ಸಣ್ಣ ತೆರಪಿನಲ್ಲಿ ಕೊರಳಲ್ಲಿರುವ ಜೀವಾಳದ ರಚನೆಕಟ್ಟುಗಳು ಎದೆಗೂಡೊಳಕ್ಕೆ ತೂರಿಬರುತ್ತವೆ. 
(ನೋಡಿ- ಉದರ)

	ಕೀಟಗಳ ಇಡೀ ಮೈಯಲಿನ ಮೂರು ತುಂಡುಗಳಲ್ಲಿ ಎದೆಗೂಡೂ ಒಂದು. ಇದರಲ್ಲಿನ 3 ಭಾಗಗಳಲ್ಲಿ ಒಂದೊಂದಕ್ಕೂ ಜೋಡಿ ಕಾಲುಗಳಿವೆ. ಹಿಂದಿನ 2 ಭಾಗಗಳಿಗೆ ಒಂದೊಂದು ಜೊತೆ ರೆಕ್ಕೆಗಳಿವೆ. 			
(ಡಿ.ಎಸ್.ಎ.; ಎಂ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ